ಭಾರತದ ಮಧ್ಯಪ್ರದೇಶದ ಜಬ್ಬಲ್‍ಪುರದ ಸಮೀಪದ ಲೆಮಿಟಾ ಘಾಟಿನ ಬಳಿ ನದಿಗಳಲ್ಲಿ ಶೇಖರಗೊಂಡ ಶಿಲೆಗಳಿಂದಾದ ಸ್ತರಗಳು. ಇವು ನದಿ-ಸಾಗರ ಸಂಗಮ ಪ್ರದೇಶದಲ್ಲೂ ಕಾಣಬರುತ್ತವೆ. ಆಂಧ್ರ ಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲೂ ಪ್ರಸರಿಸಿವೆ. ಭೂಇತಿಹಾಸದ ಕ್ರಿಟೇಷಸ್ ಕಲ್ಪದಲ್ಲಿ ಶೇಖರವಾದವೆಂದು ಇವುಗಳಲ್ಲಿಯ ಜೀವ್ಯವಶೇಷಗಳ ಸ್ತರಾನುಕ್ರಮದ ಆಧಾರದಿಂದ ನಿರ್ಧರಿಸಲಾಗಿದೆ. ಲೆಮಿಟಾ ಸ್ತರಗಳು ಕೆಲವೆಡೆ ಅರ್ಕೀಯನ್ ರೂಪಾಂತರಶಿಲೆಗಳ ಮೇಲೂ ಮತ್ತೆ ಕೆಲವಡೆ ಗೊಂಡ್ವಾನಸ್ತರಗಳ ಮೇಲೂ ಇನ್ನೂ ಬೇರೆ ಬೇರೆ ಕಡೆಗಳಲ್ಲಿ ಕ್ರಿಟೇಷಸ್ ಕಲ್ಪಕ್ಕೆ ಸೇರಿದ ಬಾಗ್‍ಸ್ತರಗಳ ಮೇಲೂ ಶೇಖರವಾಗಿರುವುದು ಕಾಣಬಹುದು. ಲಿಮಿಟಾ ಸ್ತರಗಳ ಮೇಲೆ ದಖ್ಖನ್‍ಟ್ರಾಪ್ ಶಿಲೆಗಳು ಹರಡಿರುವುದರಿಂದ ಇವನ್ನು ಟ್ರಾಪ್ ಕೆಳಸ್ತರಗಳೆಂದು ಕರೆದಿದೆ. ಇದೇ ಆಧಾರದ ಮೇಲೆ ದಖ್ಖನ್ ಶಿಲಾಸ್ರಾವ ಕ್ರಿಟೇಷಸ್ ಕಲ್ಪದ ಅಂತ್ಯದಲ್ಲಿ ಪ್ರಾರಂಭವಾಗಿರಬಹುದೆಂದು ಭಾವಿಸಲಾಗಿದೆ. 

ಲೆಮಿಟಾ ಸ್ತರಗಳಲ್ಲಿಯ ಮುಖ್ಯ ಶಿಲಾವಿಧಗಳು: ಸುಣ್ಣಶಿಲೆ, ಜೇಡಿಮಣ್ಣು ಮತ್ತು ಷೇಲ್ ಶಿಲೆಗಳು. ಈ ಸ್ತರಗಳ ಒಟ್ಟು ದಪ್ಪ ಸುಮಾರು 6ರಿಂದ 35 ಮೀಟರು. ಲೆಮಿಟಾ ಸ್ತರಗಳಲ್ಲಿ ಜೀವ್ಯವಶೇಷಗಳು ಹೆಚ್ಚಾಗಿ ಕಂಡುಬರುವುದಿಲ್ಲವಾದರೂ ಮಧ್ಯಪ್ರದೇಶದ ಜಬ್ಬಲ್‍ಪುರ ಮತ್ತು ಪಿಸ್ದುರದ ಬಳಿ ಅನೇಕ ಪ್ರಾಣಿಗಳ ಅವಶೇಷಗಳೂ ಮನಾವರನ ಉತ್ತರಕ್ಕೆ ಭಾರಿ ಫಾಸಿಲ್ ವೃಕ್ಷಗಳೂ ಕಂಡುಬಂದಿವೆ. ಸಸ್ಯವಶೇಷಗಳಲ್ಲಿ ಏಂಜಿಯೊಸ್ಪರ್ಮ್ ಗುಂಪಿಗೆ ಸೇರಿದವೇ ಅಧಿಕ, ಪ್ರಾಣಿ ಅವಶೇಷಗಳಲ್ಲಿ ಭೂತಾಕಾರದ ಡೈನೊಸಾರ್ ಗುಂಪಿಗೆ ಸೇರಿದವೇ ಹೇರಳ. ಈ ಪ್ರಾಣಿಗಳ ಪೈಕಿ ಅಂಟಾರ್ಕ್‍ಟೋಸಾರಸ್, ಟೈಟಾನೊಸಾರಸ್, ಇಂಡೊಸಾರಸ್, ಲೆಮಿಟಾಸಾರಸ್ ಮತ್ತು ಜಬ್ಬಲ್ ಪುರಿಯಾಗಳು ಪ್ರಮುಖವಾದವು. ಇವಲ್ಲದೆ ಈ ಪ್ರಾಣಿಗಳ ಮಲಾವಶೇಷಗಳೂ ಹೇರಳವಾಗಿ ದೊರೆತಿವೆ. ಅವಶೇಷಗಳ ಆಧಾರಗಳ ಮೇಲೆ ಲೆಮಿಟಾ ಸ್ತರಗಳು ಕ್ರಿಟೇಷಸ್ ಕಾಲದ ಟ್ಯುರೋನಿಯನ್ ಅವಧಿಗೆ ಸೇರಿದವೆಂದು ನಿರ್ಧರಿಸಲಾಗಿದೆ.	

(ಎಮ್.ವಿ.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ